ಜೈನ ವಾಸ್ತು, ಶಿಲ್ಪ -
	ವಿಸ್ತಾರವಾದ ಮತ್ತು ವೈವಿಧ್ಯಮಯವಾದ ಭಾರತೀಯ ವಾಸ್ತುಶಿಲ್ಪ ಶೈಲಿಗಳಲ್ಲಿ ಜೈನರ ವಾಸ್ತು, ಶಿಲ್ಪಗಳು ಹಾಸುಹೊಕ್ಕಾಗಿ ಬೆರೆತು, ಅದರ ಏಳುಬೀಳುಗಳಲ್ಲಿ ಪಾಲ್ಗೊಂಡು ವ್ಯಾಪಕವಾಗಿ ಬೆಳೆದುಬಂದಿವೆ; ಭಾರತೀಯ ಕಲಾವೈಭವಕ್ಕೆ ಮಹತ್ತರವಾದ ಕಾಣಿಕೆಯನ್ನು ನೀಡಿವೆ. ಬೌದ್ಧ ಮತ್ತು ವೈದಿಕ ಮತಗಳ ಜೊತೆಜೊತೆಯಾಗಿ ಬೆಳೆದು ಬಂದ ಜೈನಮತ ಆಯಾಕಾಲಕ್ಕೆ ಆಯಾ ಪ್ರದೇಶಗಳಲ್ಲಿ ಪ್ರಚಲಿತವಿದ್ದ ವಾಸ್ತುಶಿಲ್ಪ ಶೈಲಿಯನ್ನೇ ಕೆಲವು ವೈಶಿಷ್ಟ್ಯಗಳೊಡನೆ ತನ್ನ ಕಟ್ಟಡಗಳಲ್ಲಿ ಅಳವಡಿಸಿಕೊಂಡಿತು. ಆದ್ದರಿಂದ ಈ ವಾಸ್ತುಶಿಲ್ಪ ಶೈಲಿಗಳನ್ನು ವಿವರಿಸುವಾಗ ಜೈನಶೈಲಿಯೆಂದು ಪ್ರತ್ಯೇಕವಾಗಿ ನಿರ್ದೇಶಿಸಲಾಗದು.

	ಮೌರ್ಯರ ಕಾಲದಲ್ಲಿಯೇ ಬೌದ್ಧರ ಅನೇಕ ಯಕ್ಷಯಕ್ಷಿಯರ, ಇತರರ ಮೂರ್ತಿಗಳು ಕಂಡುಬಂದರೂ ಪೂಜೆಗಾಗಿ ಆರಾಧ್ಯ ದೈವಗಳ ಮೂರ್ತಿಗಳನ್ನು ನಿರ್ಮಾಣ ಮಾಡಿದವರು ಜೈನರೇ ಎನ್ನುವ ಭಾವನೆಗೆ ಲೊಹಾನೀಪುರದಲ್ಲಿ ದೊರೆತ ಮೌರ್ಯರ ಕಾಲದ ತೀರ್ಥಂಕರನ ಮೂರ್ತಿಯೊಂದು ಇಂಬುಕೊಡುತ್ತದೆ. ಕೆಂಪು ಮರಳುಶಿಲೆಯಲ್ಲಿ ಅತ್ಯಂತ ಹೆಚ್ಚಿನ ಹೊಳಪು ಕೊಟ್ಟು ಕಡೆದಿರುವ ಈ ಶೈಲಿ ಆಗ ಪ್ರಚಲಿತವಿದ್ದ ಬೌದ್ಧ ಯಕ್ಷಯಕ್ಷಿಯರಂತಿದ್ದು ಜಿನಮೂರ್ತಿಯ ಮುಂಡದ ಭಾಗಮಾತ್ರ ದೊರೆತಿದೆ.

	ಜೈನವಾಸ್ತುಶಿಲ್ಪಗಳು ನಮಗೆ ಮೊದಲು ಸ್ಪಷ್ಟವಾಗಿ ಗೋಚರಿಸುವುದು ಉತ್ತರ ಮಧುರೆಯಲ್ಲಿ. ಕ್ರಿ. ಪೂ. 2ನೆಯ ಶತಮಾನದಲ್ಲಿಯೇ ಅಲ್ಲಿ ಜಿನಪ್ರಾಸಾದಗಳಿದ್ದುದಕ್ಕೆ ಶಾಸನಾಧಾರಗಳಿವೆ. ಆಗ ಅವರು ಬಳಸಿದ ವಾಸ್ತುಶೈಲಿ ಬೌದ್ಧರಲ್ಲಿದ್ದಂತೆ ಸ್ತೂಪಗಳಾದರೂ ಯಾವುವೂ ಉಳಿದುಬಂದಿಲ್ಲ. ಆದರೆ ಮಧುರೆಗೆ ಸೇರಿದ ಕಂಕಾಲತೀಲದಲ್ಲಿ ನಡೆಸಿದ ಉತ್ಖನನಗಳಲ್ಲಿ ಅನೇಕ ಶಿಲ್ಪಗಳು, ಶಿಲಾಫಲಕಗಳು, ಆಯಾಗಪಟಗಳು, ಸ್ತಂಭಗಳು, ಕಟಾಂಜನದ ಭಾಗಗಳು, ದ್ವಾರಭಾಗಗಳು ಮುಂತಾದುವು ದೊರೆತು ಅಲ್ಲಿ ಒಂದು ಕಾಲದಲ್ಲಿ ನಿಂತಿದ್ದ ಜೈನ ಸ್ತೂಪಗಳ ಭವ್ಯತೆಯನ್ನು ವ್ಯಕ್ತ್ತಗೊಳಿಸುತ್ತವೆ. ತಮ್ಮ ಆಳ್ವಿಕೆಗೆ ಮುಂಚೆಯೇ ಆರಂಭವಾಗಿದ್ದ ಈ ಕಟ್ಟಡಗಳಿಗೆ ಕುಶಾನರು ತಮ್ಮ ಕಾಲದಲ್ಲಿ ಹಲವಾರು ಶಿಲ್ಪಗಳನ್ನು ಸೇರಿಸಿದರು. ಇಲ್ಲಿ ಇಟ್ಟಿಗೆಯಿಂದ ನಿರ್ಮಿತವಾಗಿದ್ದ ಸ್ತೂಪವೊಂದು ಎಂಟು ಅರಗಳುಳ್ಳ ಬಂಡಿಯ ಚಕ್ರದ ವಿನ್ಯಾಸದಲ್ಲಿದ್ದುದು ಉತ್ಖನನದಿಂದ ವ್ಯಕ್ತವಾಗಿದೆ. ಅದರ ಪೂರ್ಣರಚನೆ ಹೇಗಿತ್ತೆಂಬುದನ್ನು ಆಯಾಗಪಟಗಳ ಹಾಗೂ ಕಟಾಂಜನದ ಮೇಲಿನ ಶಿಲ್ಪಗಳಿಂದ ತಿಳಿಯಬಹುದು. ಈಗ ದೊರೆತಿರುವ ಆಧಾರಗಳಿಂದ ಇಲ್ಲಿದ್ದ ಸ್ತೂಪದ ಮೂಲ ಇಟ್ಟಿಗೆ ಕಟ್ಟಡ ಸಾಂಚಿಯ ಸ್ತೂಪದಂತೆ ಸರಳವಾದುದ್ದಾಗಿದ್ದು ಇದನ್ನು ಸುತ್ತುವರಿದಿದ್ದ ಕಲ್ಲಿನ ಕಟಾಂಜನದ ಅಡ್ಡಪಟ್ಟಿಗಳು, ದ್ವಾರ, ತೋರಣಗಂಬ ಶಿಲ್ಪದಿಂದ ತುಂಬಿದ್ದುವೆಂದು ಹೇಳಬಹುದು. ಇಲ್ಲಿ ದೊರೆತಿರುವ ವೇದಿಕೆಸ್ತಂಭಗಳು ಸೂಚಿಗಳು ಮತ್ತು ಮೇಲಿನ ಉಷ್ಣೀಷಭಾಗಗಳೊಂದರ ಮೇಲೂ ಇರುವ ಹೂಬಳ್ಳಿಗಳು, ಪದ್ಮಗಳು, ಬಗೆಬಗೆಯ ಪ್ರಾಣಿಗಳು, ಶ್ರೀವತ್ಸ, ಹಂಸ ಅಲೌಕಿಕ ಪ್ರಾಣಿಗಳು, ಹಲವು ಬಗೆಯ ಮಾನವಾಕೃತಿಗಳು ಸಹಜಸೌಂದರ್ಯದಿಂದ ಕೂಡಿದೆ. ಸ್ತಂಭಗಳ ಮೇಲೆ ಹಲವು ಭಂಗಿಗಳಲ್ಲಿ ಸಂತಸದಿಂದ ನಲಿಯುತ್ತಿರುವ ಸ್ತ್ರೀಮೂರ್ತಿಗಳ ಮನೋಹರವಾದ ರೂಪಲಾವಣ್ಯಗಳನ್ನು ಸೆರೆಹಿಡಿದಿರುವ ಶಿಲ್ಪಿ ಅದ್ಭುತವಾದ ಸಾಧನೆಯನ್ನು ಮಾಡಿದ್ದಾನೆ. ಸಾಂಚಿ ಬರಹೂತ್‍ಗಳಲ್ಲಿರುವಂತೆ ಅಚ್ಚ ಭಾರತೀಯ ಶೈಲಿಯಲ್ಲಿಯೇ ಹೆಚ್ಚಾಗಿರುವ ಈ ಮಥುರೆಯ ಶಿಲ್ಪಶೈಲಿಗಳಲ್ಲಿ ಹೊರನಾಡಿನ ಶಿಲ್ಪಶೈಲಿಯ ಛಾಯೆಯೂ ಇಲ್ಲದಿಲ್ಲ. ಇಲ್ಲಿ ಉಪಯೋಗಿಸಿರುವುದು ಹೆಚ್ಚಾಗಿ ಚುಕ್ಕೆಗಳುಳ್ಳ ಕೆಂಪುಮರಳು ಶಿಲೆ. ಶಿಲ್ಪಗಳಲ್ಲಿ ಅರ್ಹಂತನ ಪೂಜೆಗಾಗಿ ಅರ್ಪಿಸುತ್ತಿದ್ದ ಆಯಾಗಪಟಗಳು ನಡುವೆ ಇರುವ ತೀರ್ಥಂಕರ, ಸ್ತೂಪ, ಚೈತ್ಯ ಅಥವಾ ಧರ್ಮಚಕ್ರಗಳ ಸುತ್ತಲೂ ವಿಪುಲವಾದ ಕಂಡರಣೆಗಳಿಂದ ಕೂಡಿ ವಿಶಿಷ್ಟವಾಗಿವೆ. ಆದರೆ ತೀರ್ಥಂಕರರ ಮೂರ್ತಿಗಳ ಕಂಡರಣೆಯಲ್ಲಿ ಗಂಭೀರವಾದ ತಪೋನಿಷ್ಠೆ ತ್ಯಾಗಗಳನ್ನು ತೋರಿಸುವಲ್ಲಿ ಶಿಲ್ಪಿ ಯಶಸ್ವಿಯಾದಂತಿಲ್ಲ.

	ಸ್ತೂಪಗಳಿಗಿಂತ ಹೆಚ್ಚಾಗಿ ಜೈನರು ಗುಹಾವಾಸ್ತುವನ್ನು ವ್ಯಾಪಕವಾಗಿ ಬಳಸಿದ್ದಾರೆ. ಕ್ರಿ. ಪೂ. 2ನೆಯ ಶತಮಾನದಿಂದ ಕ್ರಿ. ಶ. 10ನೆಯ ಶತಮಾನದವರೆಗೂ ದೇಶದ ನಾನಾ ಭಾಗಗಳಲ್ಲಿ ಜೈನಯತಿಗಳ ವಾಸಕ್ಕಾಗಿಯೋ ಜಿನಮಂದಿರಗಳಿಗಾಗಿಯೋ ಗುಹೆಗಳನ್ನು ತೋಡಿಸಿರುವುದು, ಸ್ವಾಭಾವಿಕ ಗುಹೆಗಳನ್ನು ಮಾರ್ಪಡಿಸಿರುವುದು ಕಂಡುಬರುತ್ತದೆ. ಕ್ರಿ. ಪೂ. ಒಂದು ಮತ್ತು ಕ್ರಿ. ಶ. ಒಂದನೆಯ ಶತಮಾನದಲ್ಲಿ ಕಳಿಂಗದಲ್ಲಿ ಮಹಾಮೇಘವಾಹನರು ಜೈನಮತಕ್ಕೆ ಹೆಚ್ಚಿನ ಪ್ರೋತ್ಸಾಹ ಕೊಟ್ಟು ಕುಮಾರೀಪರ್ವತ ಎಂದರೆ ಉದಯಗಿರಿ ಖಂಡಗಿರಿಗಳಲ್ಲಿ ಜೈನಸಂನ್ಯಾಸಿಗಳು ವಿಶ್ರಮಿಸಲು ಹಲವಾರು ಗುಹೆಗಳನ್ನು ತೋಡಿಸಿದರು. ತನ್ನ 13ನೆಯ ವರ್ಷದ ಆಳ್ವಿಕೆಯಲ್ಲಿ ಖಾರೇಲ ಕುಮಾರೀಪರ್ವತದಲ್ಲಿ ಶ್ರವಣರಿಗಾಗಿ ಆಶ್ರಯಗುಹೆಗಳನ್ನು ಮಾಡಿಸಿದನೆಂದು ಅವನ ಹಥಿಗುಂಫಾ ಶಾಸನ ತಿಳಿಸುತ್ತದೆ. ಅವನ ಅಗ್ರಮಹಿಷಿಯೂ ಅರ್ಹಂತನ ಪ್ರಾಸಾದವನ್ನೂ ಶ್ರವಣರ ಗುಹೆಗಳನ್ನೂ ಮಾಡಿಸಿದಳು. ಈ ಗುಹೆಗಳು ತಗ್ಗಾಗಿದ್ದು ಪ್ರವೇಶ ದ್ವಾರಗಳು ತೆವಳಿಕೊಂಡು ಒಳಗೆ ಹೋಗಬೇಕಾದಷ್ಟು ಕಿರಿದಾಗಿವೆ. ಒಳಭಾಗ ತುಂಬ ಸರಳ. ಆದರೆ ಪ್ರವೇಶದ್ವಾರದ ಮೇಲ್ಭಾಗದಲ್ಲಿಯೂ ವರಾಂಡದ ಚಾವಣಿಗೆ ಆಸರೆಯಾಗಿಯೂ ಹಲವು ಶಿಲ್ಪಕಂಡರಣೆಗಳುಂಟು. ಒಂದೇ ವರಾಂಡಕ್ಕೆ ಹೊಂದಿಕೊಂಡಂತೆ ಸಾಲುಗವಿಗಳಿರುವ ರಾಣಿಗುಹೆ, ಸ್ವರ್ಗಪುರಿ, ಮಂಚಪುರಿ, ಗಣೇಶಗುಹೆ ಮುಂತಾದವುಗಳ ಕಂಬಗಳು ಕೆಳಗೆ ಮೇಲೆ ಚೌಕನಾಗಿದ್ದು ನಡುವೆ ಅಷ್ಟಮುಖವುಳ್ಳವು. ಗುಹೆಗಳ ಬಾಗಿಲುಗಳ ಮೇಲಿನ ತೋರಣಗಳೂ ಎರಡು ತೋರಣಗಳ ನಡುವೆ ಕಟಾಂಜನದಂತೆ ಬಿಡಿಸಿ ಅವುಗಳ ಮೇಲೆ ಚಾವಣಿಯ ಕೆಳಗೆ ವೈವಿಧ್ಯಮಯವಾಗಿ ಕಂಡರಿಸಿರುವ ಮೂರ್ತಿಗಳೂ ಪ್ರಾಣಿಗಳೂ ಎಲ್ಲವೂ ಸಾಂಚಿ ಬರಹೂತ್ ಶಿಲ್ಪಗಳ ಮಾದರಿಯಲ್ಲಿಯೇ ಇವೆ. ವರಾಂಡಗಳ ಕೆಲವು ಅರೆಗಂಬಗಳ ಮೇಲೆ ಅಳೆತ್ತರದ ದ್ವಾರಪಾಲಕ ಮತ್ತು ಇತರ ಮೂರ್ತಿಗಳಿರುವುದೂ ಉಂಟು. ಇವುಗಳಲ್ಲೆಲ್ಲ ರಾಣಿಗುಹೆಯ ಎರಡು ಕಾಪು ಕೋಣೆಗಳ ಮುಂಭಾಗವಂತೂ ವಿಪುಲವಾಗಿ ಕಂಡರಿಸಿದ ಅಲಂಕರಣಗಳು ಮತ್ತು ಶಿಲ್ಪಗಳಿಂದ ಭವ್ಯವಾಗಿವೆ. ಬಹುಶಃ ಖಾರವೇಲನ ಶಾಸನದಲ್ಲಿ ಉಕ್ತವಾಗಿರುವ ಅರ್ಹಂತನ ಪ್ರಾಸಾದ ಉದಯಗಿರಿ ಬೆಟ್ಟದ ಮೆಲ್ತುದಿಯಲ್ಲಿದ್ದು, ಬೌದ್ಧ ಚೈತ್ಯಗೃಹಗಳಂತೆ ಹಿಂಭಾಗ ಗಜಪೃಷ್ಠಾಕೃತಿಯಲ್ಲಿದ್ದು ಒಳಗೆ ಗುಂಡಾದ ಸ್ತೂಪದ ಕಟ್ಟಡವಿದ್ದ ಅವಶೇಷ ಉತ್ಖನನದಲ್ಲಿ ದೊರೆಕಿದೆ. ಇಲ್ಲಿ ಪಾಳಿಯಲ್ಲಿ ದೊರೆತ ಒಂದನೆಯ ಶತಮಾನಕ್ಕೆ ಸೇರಬಹುದಾದ ಕೆಂಪು ಮರಳು ಶಿಲೆಯಲ್ಲಿ ಕಡೆದ ಯಕ್ಷಿಯ ಮೂರ್ತಿ ಒಂದು ಅಪೂರ್ವಕೃತಿ.

	ಗಿರ್ನಾರಿನ ಬಳಿ ಜುನಾಗಡದಲ್ಲಿ ಈಗ ಬಾವಾಪ್ಯಾತ ಮಠ ಎಂದು ಕರೆಯುವ, ಕ್ರಿ.ಪೂ. ಒಂದನೆಯ ಶತಮಾನಕ್ಕೆ ಸೇರಿದ ತೀರ ಸರಳವಾದ 20 ಗುಹೆಗಳಿವೆ. ಕೇವಲe್ಞÁನಪಡೆದವರ ವಿಷಯವನ್ನು ತಿಳಿಸುವ ಜಯದಾಮನ ಕಾಲದ ಶಾಸನ ಇಲ್ಲಿರುವುದರಿಂದ ಇವೂ ಜೈನಯತಿಗಳ ವಾಸಕ್ಕಾಗಿ ಕಂಡರಿಸಿದ ಗವಿಗಳಾಗಿರಬೇಕು ಎನಿಸುತ್ತದೆ. ತಮಿಳುನಾಡಿನಲ್ಲಿ ಮುಖ್ಯವಾಗಿ ಮಧುರೆಯ ಸುತ್ತಮುತ್ತಲೂ ಇರುವ ಬೆಟ್ಟಗುಡ್ಡಗಳಲ್ಲಿ ಸ್ವಾಭಾವಿಕ ಕಂದರಗಳನ್ನು ಕ್ರಿ. ಪೂ. 2ನೆಯ ಶತಮಾನದಲ್ಲಿ ಕಡೆದು ಜೈನಯತಿಗಳ ವಾಸಕ್ಕಾಗಿ ಅನುಕೂಲ ಕಲ್ಪಿಸಲಾಗಿದೆ. ನೆಲದ ಬಂಡೆಯನ್ನು ಮಟ್ಟಸವಾಗಿ ಮಾಡಿ ಅಂಚಿನಲ್ಲಿ ತಲೆದಿಂಬಿಗಾಗಿ ದಿಂಡನ್ನು ಬಿಟ್ಟು ಅಲ್ಲಿ ವಾಸವಾಗಿದ್ದ ಯತಿಗಳ ಹೆಸರಿನ ಬ್ರಾಹ್ಮೀ ಶಾಸನಗಳನ್ನು ಹಾಕಿಸಿರುವ ಈ ಗುಹೆಗಳೇ ದಕ್ಷಿಣದ ಅತ್ಯಂತ ಪ್ರಾಚೀನ ಜೈನವಾಸ್ತು ಕೃತಿಗಳಾಗಿವೆ. ಅನಂತರದ ಕಾಲದಲ್ಲಿ ಈ ಗವಿಗಳಲ್ಲಿ ಕೆಲವು ಜಿನಮೂರ್ತಿಗಳನ್ನು ಕಂಡರಿಸಿರುವುದೂ ಉಂಟು. ಮಂಕುಲನ್, ಸಿತ್ತನವಾಸಲ್, ಅರಿತ್ತಪ್ಪಟ್ಟಿ, ಮುತ್ತುಪಟ್ಟಿ, ಅಲಗರ್‍ಮಲೈ ಮುಂತಾದ 20ಕ್ಕೂ ಹೆಚ್ಚು ಸ್ಥಳಗಳಲ್ಲಿ ಇಂಥ ಗುಹೆಗಳಿವೆ.

	ಸುಮಾರು 3-4ನೆಯ ಶತಮಾನಗಳಿಗೆ ಸೇರಿದ ಸೋನ್ ಭಂಡಾರ್ ಎಂಬ ಜೋಡಿ ಗುಹೆಗಳು ರಾಜಗೀರ್‍ನಲ್ಲಿವೆ. ಚಾವಣಿ ಕಮಾನಿನಾಕಾರದಲ್ಲಿರುವ, ಸರಳವಾದ, ಈ ಗುಹೆಗಳೊಂದರ ದಕ್ಷಿಣದ ಗೋಡೆಯ ಮೇಲೆ 6 ಜಿನಮೂರ್ತಿಗಳನ್ನು ಪರಿವಾರದೇವತೆಗಳೊಂದಿಗೆ ಬಿಡಿಸಿರುವುದಲ್ಲದೆ ಗುಹೆಗಳ ಮುಂಭಾಗದಲ್ಲಿ ಬಹುಶಃ ಮರ ಇಟ್ಟಿಗೆಗಳಿಂದ ಕಟ್ಟಿದ್ದ ವರಾಂಡವಿದ್ದ ಕುರುಹುಗಳಿವೆ.

	ಕರ್ನಾಟಕಕ್ಕೆ ಕ್ರಿ.ಪೂ.ದಲ್ಲಿಯೇ ಜೈನರು ವಲಸೆ ಬಂದರೆಂದು ಪ್ರತೀತಿ ಇದ್ದರೂ ಅವರ ವಾಸ್ತುಶಿಲ್ಪಗಳು ದೊರೆಯುವುದು ಕ್ರಿ. ಶ. 6-7ನೆಯ ಶತಮಾನಗಳಿಂದೀಚೆಗೆ, ಬಾದಾಮಿ ಚಾಲುಕ್ಯರ ಮತ್ತು ರಾಷ್ಟ್ರಕೂಟರ ಕಾಲದಲ್ಲಿ ಕೆಲವು ಜೈನಗುಹೆಗಳನ್ನು ಕಂಡರಿಸಿರುವುದುಂಟು. ಬಾದಾಮಿಯಲ್ಲಿರುವ ನಾಲ್ಕು ಗುಹಾಂತರದೇವಾಲಯಗಳಲ್ಲಿ ಒಂದು ಜೈನರದು. ಸುಮಾರು 7ನೆಯ ಶತಮಾನದಲ್ಲಿ ಕೊರೆಸಿರಬಹುದಾದ ಈ ದೇವಾಲಯ ಉಳಿದ ಮೂರರಂತೆಯೇ ಗರ್ಭಗೃಹ, ಮಹಾಮಂಟಪ ಮತ್ತು ಹೊರಮಂಟಪಗಳನ್ನು ಹೊಂದಿದ್ದು ಅವುಗಳಿಗಿಂತ ಚಿಕ್ಕದಾಗಿದೆ. ಆದರೆ ಇದರಲ್ಲಿ ಮೂರ್ತಿಶಿಲ್ಪಗಳೂ ಅಲಂಕರಣಗಳೂ ಹೆಚ್ಚು. ಇದರ ದಪ್ಪಕಂಬಗಳ ಬುಡದ ಚೌಕಮುಖಗಳಲ್ಲಿ ಪದ್ಮ, ಮಿಥುನ, ಬಳ್ಳಿಸುರಳಿಯಲ್ಲಿ, ಮಕರ ಮೊದಲಾದ ಅಲಂಕರಣಗಳಿದ್ದು ಕಂಬಗಳು ಕಲಶಕುಂಭಾಕೃತಿಗಳನ್ನು ಹೊಂದಿ ಹೆಚ್ಚು ಪ್ರಗತಿಹೊಂದಿದೆ. ಗರ್ಭಗೃಹದ ಬಾಗಿಲುವಾಡ ಹಲವು ಉದ್ದ, ಪಟ್ಟಿಕೆಗಳು ಮೇಲೆ ಕೂಡುಗಳು, ಕಿರುಗೋಪುರಗಳು, ಕೂಡುಗಳಲ್ಲಿ ಜಿನಮೂರ್ತಿಗಳು ಪಟ್ಟಕೆಗಳು, ಕೆಳಗೆ ದ್ವಾರಪಾಲಕರು ಇವುಗಳಿಂದ ಅಲಂಕೃತವಾಗಿದ್ದು ಚಾಲುಕ್ಯ ರೀತಿಯದಾಗಿದೆ. ಸಿಂಹಪೀಠದ ಮೇಲೆ ಕುಳಿತಿರುವ ಮಹಾವೀರನ ಮೂರ್ತಿ ಗರ್ಭಗೃಹದಲ್ಲಿದೆ. ಮಂಟಪಗಳ ಗೋಡೆಗಳ ಮೇಲೆ ಕೊರೆದು ಬಿಡಿಸಿರುವ ಗೊಮ್ಮಟೇಶ್ವರ, ಪಾಶ್ರ್ವನಾಥ, ಆದಿನಾಥ ಮೊದಲಾದ ಮೂರ್ತಿಗಳಿವೆ. ಇವಲ್ಲದೆ ಇಲ್ಲಿ ಕಂಡುಬರುವ ಹಲವಾರು ಯಕ್ಷಯಕ್ಷಿಯರು ತೀರ್ಥಂಕರರು ಮೊದಲಾದ ಮೂರ್ತಿಗಳನ್ನೂ ಕಂಬಗಳ ಮೇಲ್ಭಾಗದಲ್ಲಿ ಸಾಲುಗಟ್ಟಿ ನಿಂತಿರುವ ತೀರ್ಥಂಕರರ ಕಿರುಮೂರ್ತಿಗಳನ್ನೂ ಅನಂತರ ಕಂಡರಿಸಿದಂತೆ ತೋರುತ್ತದೆ.

	ಐಹೊಳೆಯಲ್ಲಿರುವ ಮೇಣಬಸದಿ 8ನೆಯ ಶತಮಾನಕ್ಕೆ ಸೇರಿದ ಜೈನ ಗುಹಾಂತರದೇವಾಲಯ. ಚೌಕಕಂಬಗಳಿರುವ ಕಿರಿದಾದ ವರಾಂಡ ಅದರ ಒಂದು ಕಡೆಯ ಗೋಡೆಯಲ್ಲಿ ಪಾಶ್ರ್ವನಾಥ ಮತ್ತು ಪರಿವಾರಮೂರ್ತಿಗಳು. ಚೌಕ ಹಜಾರದಂತಿರುವ ಒಳಮಂಟಪದ ಇಕ್ಕೆಲಗಳಲ್ಲಿ ಕಿರುಗುಡಿಗಳು ಇವೆ. ನಡುವೆ ಎರಡು ದಪ್ಪಕಂಬಗಳಿದ್ದು ಮೂರು ದ್ವಾರಗಳಿಂದ ಕೂಡಿದ ಮೂಲಗರ್ಭಗೃಹದಲ್ಲಿ ಮಹಾವೀರರ ಮೂರ್ತಿ, ಮುಂದೆ ಉನ್ನತವಾದ ಎಲಿಫೆಂಟ ಮಾದರಿಯ ಶಿರೋಭೂಷಣಗಳನ್ನುಳ್ಳ ದ್ವಾರಪಾಲಕರುಗಳು ಇವೆ. ಅದೇ ಗುಡ್ಡಕ್ಕೆ ಸೇರಿದಂತೆ ಎರಡಂತಸ್ತಿನ ಮತ್ತೊಂದು ಗುಹಾಂತರದೇವಾಲಯ ಇದೆ. ಸ್ವಾಭಾವಿಕ ಕಂದರವೊಂದನ್ನು ಗುಹೆಯನ್ನಾಗಿ ಕೊರೆದು ಅದರ ಮುಂದೆ ಚೌಕ ಕಂಬಗಳನ್ನುಳ್ಳ ವರಾಂಡವನ್ನು ಕಟ್ಟಿರುವ ಈ ವಾಸ್ತುವಿನಲ್ಲಿ ಎರಡೂ ಬಗೆಯ ಶೈಲಿಗಳ ಬೆರಕೆಯನ್ನು ಕಾಣಬಹುದು. ಇದರ ಗರ್ಭಗೃಹದ ಬಾಗಿಲೂ ಮೇಣಬಸದಿಯ ಬಾಗಿಲಿನಂತೆ ಇದ್ದು ಪ್ರಾಣಿಗಳು, ಮಾನವಾಕೃತಿಗಳು, ಬಳ್ಳಿ ಸುರುಳಿಗಳಿಂದ ನವುರಾಗಿ ಅಲಂಕರಿಸಲ್ಪಟ್ಟು ಮೇಲೆ ದ್ರಾವಿಡ ರೀತಿಯ ಅರೆಗೋಪುರಗಳನ್ನು ಹೊಂದಿದೆ.

	ಎಲ್ಲೋರದಲ್ಲಿ ಬೌದ್ಧ ವೈದಿಕ ಗುಹೆಗಳ ಕೊನೆಯಲ್ಲಿ ಒಂದು ಸಾಲು ಜೈನಗುಹೆಗಳಿವೆ. ಸುಮಾರು 30ಕ್ಕೂ ಹೆಚ್ಚು ಇರುವ ಈ ಗುಹೆಗಳಲ್ಲಿ ಹಲವು ಕಂಡರಣೆಯ ಬೇರೆ ಬೇರೆ ಹಂತಗಳಲ್ಲಿ ಉಳಿದಿವೆ. 8-9ನೆಯ ಶತಮಾನಗಳಿಗೆ ಸೇರುವ ಈ ಗುಹೆಗಳಲ್ಲಿ ಇಂದ್ರಸಭೆ ಮತ್ತು ಜಗನ್ನಾಥಗುಹೆಗಳು ಜೈನಗುಹೆಗಳಲ್ಲೆಲ್ಲಾ ವಿಸ್ತಾರವೂ ಸಂಪೂರ್ಣವೂ ಆಗಿ ಕಂಡರಿಸಿದಂಥವು. ಎರಡು ಅಂತಸ್ತಿನ ಇಂದ್ರಸಭೆ ಪ್ರಾಚೀನವೂ ಪ್ರಮುಖವೂ ಆಗಿದ್ದು ಕೆಳಗಿನ ಅಂತಸ್ತಿನಲ್ಲಿ 4 ಕಂಬಗಳ ಒಂದು ವರಾಂಡ, ಎರಡು ಕಂಬಗಳ ಒಂದು ಅಂಕಣ, ಸುಕನಾಸಿ ಮತ್ತು ಗರ್ಭಗೃಹಗಳು ಮೇಲಂತಸ್ತಿನಲ್ಲಿ ಒಂದು ದೊಡ್ಡ ಹಜಾರ ಅದರ ಎರಡು ಕಡೆಯೂ ಗುಡಿಗಳೂ ಇವೆ. ವರಾಂಡದ ದಪ್ಪಕಂಬಗಳು ಕುಂಭ, ಬಳ್ಳಿ ಕಳಶಗಳಿಂದಲಂಕೃತವಾಗಿ ಸುಂದರವಾಗಿವೆ. ಗೋಡೆಗಳಲ್ಲಿ ಅನೇಕ ತೀರ್ಥಂಕರರು, ಯಕ್ಷ-ಯಕ್ಷಿಯರು ಗೊಮ್ಮಟ ಮುಂತಾದ ಮೂರ್ತಿಗಳಿದ್ದು ಮಂಟಪದ ತೊಲೆ, ಚಾವಣಿಗಳಲ್ಲಿ ಚಿತ್ರಗಳಿವೆ. ಇಂದ್ರಸಭೆಯಂತೆಯೇ ಇರುವುದು ಜಗನ್ನಾಥ ಸಭೆ, ಇಲ್ಲಿ ವರಾಂಡದ ಎರಡು ತುದಿಯ ಗೋಡೆಗಳಲ್ಲಿ ಕಂಡರಿಸಿರುವ ಕುಬೇರ ಮತ್ತು ಅಂಬಿಕಾಮೂರ್ತಿಗಳ ಸುಂದರಕೃತಿಗಳು ಕಂಭ, ಕಲಶಾಕೃತಿಗಳನ್ನು ಹೊಂದಿರುವ ಇಲ್ಲಿನ ದಪ್ಪಕಂಬಗಳು ಹೆಚ್ಚು ಅಲಂಕಾರಿಕವಾಗಿವೆ. ಈ ಗುಹೆಗಳನ್ನು ಬಹುಶಃ 10ನೆಯ ಶತಮಾನದ ಹೊತ್ತಿಗೆ ಕೊರೆದು ಮುಗಿಸಲಾಗಿತ್ತು. ಸುಂದರ ಕಂಡರಣೆಗಳಿಂದಾಗಿ ಈ ಗುಹೆಗಳು ಇಲ್ಲಿನ ಇತರ ಗುಹೆಗಳಿಗಿಂತ ಉತ್ತಮವಾಗಿವೆ. ಅಲಂಕರಣ, ವಸ್ತ್ರಾಭರಣಗಳು, ಮಾನವಾಕೃತಿಯ ನಿಲುವು ಭಂಗಿ ಎಲ್ಲವನ್ನೂ ಅತ್ಯಂತ ಚತುರತೆಯಿಂದ ಶಿಲ್ಪಿಸಲಾಗಿದೆ. ಶಾಸ್ತ್ರದ ಕಟ್ಟಿನಿಂದ ಸೀಮಿತವಾಗಿರುವ ಇಲ್ಲಿನ ತೀರ್ಥಂಕರ ಮೂರ್ತಿಗಳು ಅಷ್ಟು ಆಕರ್ಷಕವಾಗಿಲ್ಲದಿದ್ದರೂ ಭವ್ಯವಾದ, ಸೂಕ್ಷ್ಮವಾದ ಕಂಡರಣೆಗೆ ಅದರಲ್ಲಿಯೂ ನಿಖರವಾದ ಕಂಡರಣೆಗೆ ಹೆಸರಾದ ಬಗೆಬಗೆಯ ಕಂಬಗಳು ರಾಷ್ಟ್ರಕೂಟ ಶಿಲ್ಪದ ಉನ್ನತ ಮಾದರಿಯನ್ನು ಪ್ರತಿಬಿಂಬಿಸುತ್ತವೆ.

	ಗುಹೆಗಳನ್ನು ಕೊರೆದಿರುವಂತೆಯೇ ಬಂಡೆಗಳನ್ನೇ ಕಂಡರಿಸಿ ರಚಿಸಿರುವ ಏಕಶಿಲೆಯ ಜೈನದೇವಾಲಯಗಳು ಉಂಟು. ಐಹೊಳೆಯಲ್ಲಿ ಮೇಗುಟಿಯ ಗುಡ್ಡದ ಪಶ್ಚಿಮ ಇಳಿಜಾರಿನಲ್ಲಿ 7ನೆಯ ಶತಮಾನದಲ್ಲಿ ಬಂಡೆಯೊಂದನ್ನು ಕತ್ತರಿಸಿ ನಿರ್ಮಿಸಿದ ಚಿಕ್ಕದೊಂದು ದೇವಾಲಯವಿದ್ದು ಅದಕ್ಕೆ ಗರ್ಭಗೃಹ ಮತ್ತು ಮಂಟಪಗಳಿವೆ. ಪಲ್ಲವರ ದ್ರಾವಿಡಶೈಲಿಯ ಮಹಾಬಲಿಪುರದ ರಥಗಳಿಂದ ಸ್ಫೂರ್ತಿ ಪಡೆದು, ರಾಷ್ಟ್ರಕೂಟರು ಎಲ್ಲೋರದಲ್ಲಿ ಬೆಟ್ಟವನ್ನೇ ಕಡೆದು ಕೈಲಾಸವನ್ನು ನಿರ್ಮಿಸಿದುದನ್ನೇ ಮಾದರಿಯಾಗಿಟ್ಟುಕೊಂಡು ಅದರ ಕಾಲು ಭಾಗದಷ್ಟಿರುವ ಜೈನದೇವಾಲಯವೊಂದನ್ನು ಅಲ್ಲಿ ಒಂದೇ ಬಂಡೆಯಲ್ಲಿ ಕಡೆದಿದ್ದಾರೆ. ಅದನ್ನು ಭೋಲ್ ಕೈಲಾಸವೆನ್ನುತ್ತಾರೆ. ಗರ್ಭಗೃಹ ಅಂತರಾಳ ಮತ್ತು ಮಂಟಪಗಳಿಂದ ಕೂಡಿರುವ ಸುಮತಿನಾಥನ ಈ ದೇವಾಲಯದ ಗೋಡೆಗಳು ಹಲವಾರು ಶಿಲ್ಪಗಳಿಂದ ತುಂಬಿದೆ. ಇದಲ್ಲದೆ ಇಂದ್ರಸಭೆ ಗುಹೆಯ ಮುಂದಿನ ಪ್ರಾಂಗಣದಲ್ಲಿ ಮತ್ತೊಂದು ಇದಕ್ಕಿಂತ ಕಿರಿದಾದ, ಸೊಬಗಿನಿಂದ ಕೂಡಿದ ಚೌಮುಖ ವಿಮಾನವೊಂದಿದೆ. ಇದು, ನಾಲ್ಕು ಕಡೆಯೂ ಪ್ರವೇಶ ದ್ವಾರ ಅವುಗಳ ಮುಂದೆ ಕಿರಿದಾದ ಮುಖಭದ್ರ. ಮೇಲೆ ದ್ರಾವಿಡ ರೀತಿಯ ವಿಮಾನ ಇರುವ ಒಂದು ಸುಂದರ ಮಂಟಪ. ಇದರಲ್ಲಿ ನಾಲ್ಕು ಕಡೆಯೂ ಜಿನಬಿಂಬಗಳನ್ನು ಕಡೆದಿರುವ ಚೌಕ ಕಂಬವಿದೆ. ಇವುಗಳೊಂದಿಗೆ ಶ್ರವಣಬೆಳಗೊಳದಲ್ಲಿ ದೊಡ್ಡಬಂಡೆಯನ್ನು ಕೊರೆದು ನಿರ್ಮಿಸಿರುವ ಅಖಂಡದ್ವಾರವನ್ನೂ ಹೆಸರಿಸಬಹುದು. ಇದರ ಮೇಲ್ಗಡೆ ಸುಂದರವಾದ ಗಜಲಕ್ಷ್ಮಿಯ ಮೂರ್ತಿಯನ್ನು ಬಿಡಿಸಿದೆ.

	ಶಿಲಾನಿರ್ಮಿತವಾದ ಜಿನಮಂದಿರಗಳು 4-5ನೆಯ ಶತಮಾನಗಳಲ್ಲಿಯೇ ಆರಂಭಗೊಂಡು ದೇಶದ ನಾನಾ ಭಾಗಗಳಲ್ಲಿ ಕಾಲಕ್ರಮೇಣ ಶೈವವೈಷ್ಣವ ದೇವಾಲಯಗಳಂತೆ ವಿಧವಿಧವಾಗಿ ರೂಪುಗೊಂಡು ಬೆಳೆದುಬಂದಿವೆ. 4-5ನೆಯ ಶತಮಾನಗಳಲ್ಲಿ ಇಂಥ ಜಿನಮಂದಿರಗಳಿದ್ದುದಕ್ಕೆ ಸಾಹಿತ್ಯ, ಶಾಸನಗಳ ಆಧಾರವಿದ್ದರೂ ಅವು ಬಹುಪಾಲು ಉಳಿದುಬಂದಿಲ್ಲ. ಪಹಾರ್‍ಪುರ ತಾಮ್ರಶಾಸನದಿಂದ 479ರಲ್ಲಿ ಗುಪ್ತರ ಕಾಲದ ಒಂದು ವಿಸ್ತಾರವಾದ ಜೈನವಿಹಾರ ವಟಗೋಹಾಲಿಯಲ್ಲಿದ್ದಂತೆ ತಿಳಿದುಬರುತ್ತದೆ. ವೈಭಾರಗಿರಿಯ ಮೇಲೆ ಇದೇ ಕಾಲದ ದೇವಾಲಯವೊಂದಿದ್ದು, ಮಧ್ಯ ಒಂದು ಗುಡಿ, ಸುತ್ತಲೂ ಅಂಗಳ, ಅದನ್ನು ಸುತ್ತಿಕೊಂಡು ನಾಲ್ಕು ಕಡೆಯೂ ಸಾಲುಕೋಣೆಗಳಿದ್ದ ಕುರುಹು ಮಾತ್ರ ಈಗ ಉಳಿದಿದೆ. ಸಿರ್ ಪಹಾರಿ ವಿದಿಶ ಮೊದಲಾದ ಕಡೆ ದೊರೆತ ಹಲವಾರು ಗುಪ್ತರ ಕಾಲದ ಜಿನಮೂರ್ತಿಗಳು ಆ ಕಾಲದಲ್ಲಿ ಅಲ್ಲಿ ಹಲವು ಜಿನಮಂದಿರಗಳಿದ್ದುದಕ್ಕೆ ಕುರುಹಾಗಿವೆ. ಕರ್ನಾಟಕದ ಹಲಸಿಯಲ್ಲಿರುವ ಒಂದು ಜಿನಬಸದಿ ಕದಂಬರ ಕಾಲಕ್ಕೆ ಸೇರಿದ್ದು ಬಹುಶಃ ಈಗ ಉಳಿದುಬಂದಿರುವ ಅತ್ಯಂತ ಪ್ರಾಚೀನ ಶಿಲಾಕಟ್ಟಡವಾಗಿದೆ. ಗರ್ಭಗೃಹ, ಗರ್ಭಗೃಹಕ್ಕಿಂತ ದೊಡ್ಡದಾದ ಸುಕನಾಸಿ ಮಾತ್ರ ಇರುವ ಈ ಬಸದಿಯ ಗೋಡೆಗಳನ್ನು ದಪ್ಪ ಉರುಟು ಕಲ್ಲುಗಳನ್ನು ಸೇರಿಸಿ ನಿರ್ಮಿಸಲಾಗಿದೆ. ಯಾವ ರೀತಿಯ ಅಲಂಕರಣವೂ ಇಲ್ಲದೆ, ನಯ ನಾಜೂಕಿಲ್ಲದೆ ಕಟ್ಟಿರುವ ಈ ಕಟ್ಟಡ ಶಿಲಾಕಟ್ಟಡಗಳ ರಚನೆಯಲ್ಲಿ ಪ್ರಾರಂಭಿಕ ಘಟ್ಟದ್ದೆಂದು ಹೇಳಬಹುದು. ಕದಂಬ ಮೃಗೇಶವರ್ಮನ ತಾಮ್ರಪಟದಲ್ಲಿ ಉಲ್ಲೇಖಿಸಿರುವ ಜೈನಬಸದಿ ಇದೇ ಆಗಿರಬೇಕು. ಕಂಚಿಗೆ ಸೇರಿದಂತಿದ್ದು ಜಿನಕಂಚಿ ಎಂದು ಹೆಸರಾಗಿರುವ ತಿರುಪ್ಪರುತ್ತಿಕುಂಡ್ರಂ ಬಸದಿಗಳಿಂದಲೂ ಇತರ ಅವಶೇಷಗಳಿಂದಲೂ ಕೂಡಿದೆ. ಇಲ್ಲಿರುವ ಎರಡು ಬಸದಿಗಳಲ್ಲಿ ಚಿಕ್ಕದಾದ ಚಂದ್ರಪ್ರಭಾವಲಯ ಪಲ್ಲವರ ಕಾಲಕ್ಕೂ ದೊಡ್ಡದಾದ ವರ್ಧಮಾನ ಬಸದಿ ಚೋಳರ ಕಾಲಕ್ಕೂ ಸೇರುತ್ತದೆ. ತಿರುಪ್ಪರುತ್ತಿಯಲ್ಲದೆ ತಿರುವ¾ುಂಗೊಂಡೈ, ಕು¾ುಂತಿ, ತಿರುಕೊಟ್ಟಾ¾ು, ತಿರುಚ್ಚಾರಣಂ ಮುಂತಾದ ಪ್ರಸಿದ್ಧ ಜೈನಕ್ಷೇತ್ರಗಳನ್ನು ಕಿ¿ಗುಮಲೈ ಶಾಸನಗಳು ಹೆಸರಿಸುತ್ತವೆ. ಕಿ¿ಗುಮಲೆಯಲ್ಲಿ ದೊಡ್ಡ ಬಂಡೆಯೊಂದರ ಪಕ್ಕೆಯಲ್ಲಿ 10ನೆಯ ಶತಮಾನಕ್ಕೆ ಸೇರುವ ಹಲವಾರು ತೀರ್ಥಂಕರರು, ಯಕ್ಷಯಕ್ಷಿಯರು, ದಾನಿಗಳು, ಅವರ ಗುರುಗಳು ಮುಂತಾದ ಮೂರ್ತಿಗಳ ಅರೆಯುಬ್ಬುಶಿಲ್ಪಗಳಿವೆ. ಕೇರಳದ ತಿರುಚ್ಚಾರಂ ಅಥವಾ ಚಿತಾರಲ್‍ನಲ್ಲಿನ ಹಲವು ಜೈನಶಿಲ್ಪಗಳು 9ನೆಯ ಶತಮಾನದ ದ್ರಾವಿಡ ಶೈಲಿಯ ನಿರೂಪಣಗಳಾಗಿವೆ. ಉತ್ತರ ಭಾರತದಲ್ಲಿ 8ನೆಯ ಶತಮಾನದಿಂದೀಚೆಗೆ ಹಲವು ಪ್ರಸಿದ್ಧ ಜೈನಕ್ಷೇತ್ರಗಳಲ್ಲಿ ನಿರ್ಮಾಣವಾದ ಜೈನದೇವಾಲಯಗಳು ಉಳಿದುಬಂದಿವೆ. ಫನೇರಾವ್‍ನಲ್ಲಿರುವ ಮಹಾವೀರ ದೇವಾಲಯ, ಓಸಿಯಾದ ಮಹಾವೀರ ಮತ್ತು ಇತರ ಬಸದಿಗಳು ನೀಲಕಂಠ ಅಥವಾ ಪರನಗರದಲ್ಲಿರುವ 9-10ನೆಯ ಶತಮಾನಗಳಿಗೆ ಸೇರಿದ ಪ್ರಸಿದ್ಧವಾದ ಬಸದಿಗಳು, ನಾಗರಶೈಲಿಗೆ ಹೆಸರಾದುವು. ಘನೇರಾವ್‍ನ ಮಹಾವೀರ ದೇವಾಲಯದ ಚಾವಣಿಗಳು, ಬಾಗಿಲುವಾಡಗಳು ಶಿಲ್ಪಗಳಿಂದ ತುಂಬಿದ್ದರೆ ರಾಜಸ್ಥಾನದ ವಾಸ್ತುಶೈಲಿಗೆ ಸೇರಿದ ಓಸಿಯಾದ ಮಹಾವೀರದೇವಾಲಯದ ಅತ್ಯಂತ ಸುಂದರವಾದ ಮಂಟಪ, ಮೂಲದೇವಾಲಯ ಮೊದಲಾದುವು ಜೈನಶಿಲ್ಪದ ಭಂಡಾರಗಳಂತಿವೆ. ಬರ್ದವಾನ್ ಜಿಲ್ಲೆಯ ಸಾತ್‍ದೇವುಲಿಯಲ್ಲಿರುವ ಇಟ್ಟಿಗೆಯಿಂದ ಕಟ್ಟಿರುವ ಬಸದಿ ರೇಖನಾಗರ ಶೈಲಿಯಲ್ಲಿದ್ದು ನೇರವಾಗಿ ಮೇಲೆದ್ದು ತುದಿಯಲ್ಲಿ ಒಳಗೆ ಬಾಗುವ ಶಿಖರವನ್ನು ಹೊಂದಿದೆ. 10-11ನೆಯ ಶತಮಾನಗಳ ಹಲವಾರು ಬಸದಿಗಳು ಬಂಕುರಾ ಜಿಲ್ಲೆಯ ಅಂಬಿಕಾನಗರ, ಚಿತ್ತಗಿರಿ, ಬರ್ಕೋಲಾ, ಪರೇಶ್‍ನಾಥ್ ಮೊದಲಾದ ಕಡೆ ಇವೆ. ಈ ಬಸದಿಗಳು ಒರಿಸ್ಸಾ ದೇವಾಲಯಗಳ ಮಾದರಿಯವು. ಆದರೆ ಇವುಗಳ ಬಹುಭಾಗ ಈಗ ನಾಶವಾಗಿದೆ. ಅಲ್ಲೆಲ್ಲ ಹರಡಿರುವ ಜಿನಮೂರ್ತಿಗಳು, ಯಕ್ಷಯಕ್ಷಿಯರು, ಇತರ ಶಿಲ್ಪಗಳ ಬಾಹುಳ್ಯದಿಂದ ಒಂದು ಕಾಲದಲ್ಲಿ ಅಲ್ಲಿ ನಿಂತಿದ್ದ ಜೈನದೇವಾಲಯಗಳ ಭವ್ಯತೆಯನ್ನು ಮನಗಾಣಬಹುದು. ಬಂಗಾಳ ಬಿಹಾರಗಳಲ್ಲಿ ಹೀಗೆಯೇ ಪ್ರಸಿದ್ಧವಾಗಿದ್ದ ಜೈನಕೇಂದ್ರಗಳೆಂದರೆ ಚರ, ಸಂಕ, ಸೆಮೇರ, ಬೋರಮ್, ಬಲರಾಮ್‍ಪುರ, ದೇವೋಲಿ, ಪಕ್ಸೀರ, ದುಲ್ಮಿ ಮೊದಲಾದುವು. ಕಂದಸ್ವತಿ ಮತ್ತು ಸುವರ್ಣ ರೇಖಾನದಿಗಳ ಕಣಿವೆಗಳಲ್ಲಿ ಇಂಥ ಹಲವಾರು ಪಾಳುಬಿದ್ದ ಬಸದಿಗಳನ್ನು ಗುರುತಿಸಬಹುದು. ಪಕ್ಸೀರದಲ್ಲಂತೂ ನೂರಾರು ಮೂರ್ತಿಗಳು, ಶಿಲ್ಪಗಳು ಚೆಲ್ಲಾಡಿವೆ. 9-11ನೆಯ ಶತಮಾನಗಳ ಕಾಲಕ್ಕೆ ಸೇರಿಸಬಹುದಾದ ಇಲ್ಲಿನ ಮೂರ್ತಿಗಳಲ್ಲಿ ಗುಪ್ತರ ಕಲೆಯ ಲಾವಣ್ಯವನ್ನು ಕಾಣಬಹುದು. ಪಾಶ್ರ್ವನಾಥ, ಕುಂಥುನಾಥ, ನೇಮಿನಾಥ, ಶಾಂತಿನಾಥ ಮೊದಲಾದ ತೀರ್ಥಂಕರರು, ಆಕಾಶದಲ್ಲಿ ತೇಲುತ್ತಿರುವಂತೆ ಕಂಡರಿಸಿರುವ ಗಂಧರ್ವರು, ಅಂಬಿಕಾಯಕ್ಷಿ ಮತ್ತು ಇತರ ಯಕ್ಷರು ಇವುಗಳಲೆಲ್ಲ ಶಿಲ್ಪಿಯ ಚಾತುರ್ಯ ಹೊಮ್ಮಿದೆ. ಗ್ಯಾರಸ್‍ಪುರದಲ್ಲಿರುವ ಹಲವಾರು ದೇವಾಲಯಗಳಲ್ಲಿ ಜೈನಮಂದಿರವಾದ ಮಾಲಾದೇವಿ ದೇವಾಲಯ ಪ್ರತೀಹಾರರ ವಾಸ್ತುಶಿಲ್ಪದ ಅತ್ಯುನ್ನತಮಟ್ಟವನ್ನು ಪ್ರದರ್ಶಿಸುತ್ತಿದ್ದು ಪ್ರೌಢವಾದ ಅಲಂಕರಣಶೈಲಿಗೆ ಹೆಸರಾಗಿದೆ. ದೇವಘರ್‍ನಲ್ಲಿ ಕೋಟೆಯ ಪೂರ್ವಭಾಗದಲ್ಲಿ 30ಕ್ಕೂ ಹೆಚ್ಚು ಜೈನದೇವಾಲಯಗಳಿದ್ದು ಇವುಗಳ ಆರಂಭ 7ನೆಯ ಶತಮಾನದಲ್ಲಿಯೇ ಆಗಿದ್ದರೂ ಉಳಿದಿರುವ ಬಹುಭಾಗ 10-12ನೆಯ ಶತಮಾನಗಳ ಕಾಲದಲ್ಲಿ ನಿರ್ಮಿತವಾದುವು. ಇವುಗಳಲ್ಲಿ ಅನೇಕವು ಚೌಕ ಅಥವಾ ದೀರ್ಘ ಚತುರಸ್ರಾಕಾರದ ಗರ್ಭಗೃಹ ಮತ್ತು ಸುಕನಾಸಿಗಳನ್ನು ಮಾತ್ರ ಹೊಂದಿದ ಸರಳವಾದ ಸಣ್ಣ ಸಣ್ಣ ದೇವಾಲಯಗಳು. ಇಲ್ಲಿನ ಎರಡು ದೇವಾಲಯಗಳ ಮೇಲೆ ಔತ್ತರೇಯ ರೇಖಾನಾಗರ ಶೈಲಿಯ ಶಿಖರಗಳಿದ್ದು 9ನೆಯ ಶತಮಾನಕ್ಕೆ ಸೇರಿದ ಮತ್ತೆರಡು ದೇವಾಲಯಗಳು ಶಿಲ್ಪಾಲಂಕರಣಗಳಿಂದ ತುಂಬಿಹೋಗಿವೆ. ತ್ರ್ರಿಕೂಟಾಚಲವಾಗಿದ್ದು ಪ್ರತೀಹಾರ ಶಿಲ್ಪಮಾದರಿಯ ಕಂಬಗಳು, ಬಾಗಿಲುವಾಡಗಳು ಇತರ ಅಲಂಕರಣಗಳಿಂದ ಕೂಡಿದ ಇವುಗಳಲ್ಲಿನ ಒಂದು ದೇವಾಲಯದಲ್ಲಿರುವ ಮೂಲತೀರ್ಥಂಕರನ ಮೂರ್ತಿ ತನ್ನ ಗಂಭೀರವಾದ ಮುಖ ಮುದ್ರೆಯಿಂದ ಭಾವನಾ ಅಭಿವ್ಯಕ್ತಿಯಿಂದ ಆ ಕಾಲದ ಕೃತಿಗಳಲ್ಲಿ ಅತ್ಯುತ್ತಮ ಕೌಶಲದಿಂದ ಕೂಡಿದುದೆಂದು ಹೇಳಬಹುದು. ಈ ಊರಿನಲ್ಲಿರುವ ಮೂರ್ತಿಶಿಲ್ಪಗಳು ಸಹಸ್ರ ಸಂಖ್ಯೆಯನ್ನು ಮೀರಿವೆ.

	ಭಾರತದ ಪಶ್ಚಿಮ ಭಾಗದಲ್ಲಿಯೂ ಅಕೋಟ, ವಲಭಿ, ವಸಂತಮಲ್, ಭಿನ್ನಮಲ್ ಮೊದಲಾದ ಕಡೆ ದೊರೆತಿರುವ ಹಲವಾರು ಜಿನಮೂರ್ತಿಗಳು ಆ ಭಾಗದಲ್ಲಿ 6-7ನೆಯ ಶತಮಾನಗಳಲ್ಲಿ ಜೈನದೇವಾಲಯಗಳಿದ್ದುದನ್ನು ಸೂಚಿಸುತ್ತವೆ. ಬರೋಡದ ಬಳಿ ಇರುವ ಅಕೋಟದಲ್ಲಿ ದೊರೆತ 68 ಜಿನಮೂರ್ತಿಗಳ ನಿಕ್ಷೇಪದಲ್ಲಿ ಕೆಲವು ಆ ಭಾಗದಲ್ಲಿ 11ನೆಯ ಶತಮಾನದವರೆಗೆ ಬೇರೆ ಬೇರೆ ಕಾಲಗಳಿಗೆ ಸೇರಿದವು. ಈ ಮೂರ್ತಿಗಳಲ್ಲಿ ಲೋಹಮೂರ್ತಿ ಶಿಲ್ಪಗಳ ಮಾದರಿಗಳನ್ನು, ಬೆಳೆವಣಿಗೆಯನ್ನು ಗುರುತಿಸಬಹುದು. ಇವುಗಳಲ್ಲಿ ಅತಿಪ್ರಾಚೀನವಾದ ಅತ್ಯಂತ ಸುಂದರವಾದ ಮುಖವನ್ನುಳ್ಳ ವಸ್ತ್ರಧಾರಿ ಋಷಭನಾಥನ ಮೂರ್ತಿ ಗಾಂಧಾರ ಶಿಲ್ಪದ ಮಾದರಿಯ ಉದಾಹರಣೆ. 8ನೆಯ ಶತಮಾನಕ್ಕೆ ಸೇರಬಹುದಾದ ಚಾಮರಧಾರಿ ಮೂರ್ತಿಗಳು ಆ ಭಾಗದ ಲೋಹಮೂರ್ತಿಶಿಲ್ಪಗಳಂತೆಯೇ ಅತ್ಯುತ್ತಮವಾದುದು. ಇವುಗಳಿಗಿಂತ ಹಿಂದಿನ ಕಾಲಕ್ಕೆ ಸೇರಿದ ಕೆಲವು ಲೋಹಮೂರ್ತಿಗಳು ಭೋಜಪುರ ಜಿಲ್ಲೆಯ ಚೌಸದಲ್ಲಿ ದೊರೆತಿದ್ದು ಕಡ್ಡಿಕಾಲುಗಳು, ಅಳತೆಗೆಟ್ಟ ಆಕಾರ, ಒರಟು ಕೆಲಸಗಳಿಂದ ಕೂಡಿದ್ದು ಸ್ಥಳೀಯ ಶೈಲಿಯಲ್ಲಿವೆ. ಚಂದೇಲರ ಆಳ್ವಿಕೆಯಲ್ಲಿ ಬುಂದೇಲಖಂಡದ ಪ್ರಾಂತದಲ್ಲಿ ಜೈನಮತಕ್ಕೆ ಹೆಚ್ಚಿನ ಪ್ರೋತ್ಸಾಹ ದೊರೆತು 9ರಿಂದ 12ನೆಯ ಶತಮಾನದಲ್ಲಿ ಅನೇಕ ಭವ್ಯವಾದ ಜಿನಬಸದಿಗಳ ನಿರ್ಮಾಣಕ್ಕೆ ಕಾರಣವಾಯಿತು. ಮಹೋಬ, ಖಜುರಾಹೋಗಳು ಜೈನದೇವಾಲಯಗಳಿಗೆ ಪ್ರಸಿದ್ಧವಾಗಿವೆ. ಖಜುರಾಹೋದಲ್ಲಿರುವ 6 ಜೈನ ದೇವಾಲಯಗಳು ಅಲ್ಲಿನ ಇತರ ದೇವಾಲಯಗಳ ಮಾದರಿಯಲ್ಲೇ ಇದ್ದರೂ ಅವುಗಳ ಹೊರಗೋಡೆಗಳ ಮೇಲೆ ಅರೆಗಂಬಗಳು, ತೋರಣಗಳ ಬದಲು ಮೂರ್ತಿ ಶಿಲ್ಪಗಳಿವೆ. ಆದಿನಾಥ, ಪಾಶ್ರ್ವನಾಥ ಮತ್ತು ಘಂಟೈದೇವಾಲಯಗಳು ಭವ್ಯವಾದವು. ಇಲ್ಲಿನ ಗೋಡೆಗಳ ಮೇಲೆ ಕಾಮಕೇಳಿಕೆಗಳನ್ನು ತೋರಿಸುವ ಮಿಥುನ ವಿಗ್ರಹಗಳಿರುವುದೊಂದು ವಿಶೇಷ. ಅರಂಗ್ ಎಂಬಲ್ಲಿರುವ ಜೈನದೇವಾಲಯದ ಶಿಖರವೂ ಇಂಥ ವಿಗ್ರಹಗಳಿಂದ ತುಂಬಿವೆ. ಅಬು, ಗಿರ್ನಾರ್, ಶತ್ರುಂಜಯ ಬೆಟ್ಟಗಳ ಮೇಲಿನ ದೇವಾಲಯಗಳು ವಾಘೇಲರಾಜರ ಅಧಿಕಾರಿಗಳಿಂದ ನಿರ್ಮಿತವಾದವು. ಅಮೃತಶಿಲೆಯಲ್ಲಿ ನಿರ್ಮಿತವಾದ ಈ ದೇವಾಲಯಗಳ ಚಾವಣಿ, ತೊಲೆಗಳು, ಕಂಬಗಳಲ್ಲೆಲ್ಲ ಸುಂದರವಾದ ಕಂಡರಣೆಯಿದೆ.

	ಕರ್ನಾಟಕದಲ್ಲಿ ಅನೇಕ ರಾಜಮನೆತನಗಳು ಕೊಟ್ಟ ಪ್ರೋತ್ಸಾಹದಿಂದ ಜೈನ ವಾಸ್ತುಶಿಲ್ಪ ವಿಸ್ತಾರವಾಗಿಯೂ ವೈವಿಧ್ಯಮಯವಾಗಿಯೂ ಬೆಳೆಯಲವಕಾಶವಾಯಿತು. ಬಾದಾಮಿ ಚಾಲುಕ್ಯರ ಕಾಲದಲ್ಲಿ ಗುಹೆಗಳಲ್ಲದೆ ಇಮ್ಮಡಿ ಪುಲಿಕೇಶಿಯ ಕಾಲದಲ್ಲಿ ರವಿಕೀರ್ತಿ ಐಹೊಳೆಯಲ್ಲಿ ಕಟ್ಟಿಸಿದ ಮೇಗುಟಿ ದೇವಾಲಯ ವಿಶಿಷ್ಟವಾದುದು. ಚೌಕನಾದ, ಗೋಡೆಗಳಿಂದಾವೃತವಾದ ದೊಡ್ಡ ಮಂಟಪದ ನಡುವೆ ಗರ್ಭಗೃಹ. ಹಿಂಭಾಗದ ಎರಡು ಮೂಲೆಗಳಲ್ಲಿಯೂ ಕಿರುಗುಡಿಗಳು. ಮುಂಭಾಗದಲ್ಲಿ ಚಾಚಿದ ಮುಖಭದ್ರದ ಮೇಲೆ ವಿಮಾನದ ಬದಲು ಮತ್ತೊಂದು ಅಂತಸ್ತು. ಇಷ್ಟು ಇರುವ ಈ ಬಸದಿ ಇಲ್ಲಿನ ಪ್ರಾಚೀನ ಕಟ್ಟಡಗಳಲ್ಲೊಂದು. ಹಳ್ಳೂರಿನಲ್ಲಿರುವ ಮೋಗುಡಿ ಬಸದಿಯೂ ಇದೇ ರೀತಿಯಲ್ಲಿದ್ದು ಏಳನೆಯ ಶತಮಾನದಲ್ಲಿಯೇ ಕಟ್ಟಿದುದಾಗಿದೆ. ಐಹೊಳೆಯಲ್ಲಿರುವ ಇತರ ಜಿನಮಂದಿರಗಳೆಂದರೆ ಯೆನಿಯವಾರಗುಡಿ, ಯೋಗಿನಾರಾಯಣ ಗುಡಿಗಳ ಗುಂಪು ಮತ್ತು ಚರಂತಿಮಠ. ಚರಂತಿಮಠದ ಗುಡಿಗಳ ಸಮೂಹದಲ್ಲಿ ಮುಂದಿನ ಚಾಳುಕ್ಯ ಕಾಲದ ಬೆಳೆವಣಿಗೆಯ ಮುನ್ಸೂಚನೆಯನ್ನು ಕಾಣಬಹುದು. ಪಟ್ಟದಕಲ್ಲಿನ ಬಳಿ ಇರುವ ಮತ್ತೊಂದು ಜೈನದೇವಾಲಯ ಜೈನನಾರಾಯಣ ಎಂದು ಕರೆಯುವ ರಾಷ್ಟ್ರಕೂಟರ ಕಾಲಕ್ಕೆ ಸೇರಿದ್ದು. ಕಲ್ಯಾಣಿ ಚಾಳುಕ್ಯರ ಕಾಲದಲ್ಲಿ ಬೆಳೆದ ವಾಸ್ತುಶೈಲಿಯ ಮೂಲರೂಪವನ್ನು ಇದರಲ್ಲಿ ಗುರುತಿಸಬಹುದು.

	ಗಂಗರ ಕಾಲದಲ್ಲಿ ಜೈನವಾಸ್ತುಶಿಲ್ಪ ವಿಪುಲವಾಗಿ ಬೆಳೆಯಿತು. ಇವರ ಮೊದಲ ಕಟ್ಟಡಗಳು ಬಹುಶಃ ಇಟ್ಟಿಗೆ ಮರಗಳಿಂದ ನಿರ್ಮಿತವಾಗಿದ್ದು ಈಗ ಹೆಚ್ಚು ಉಳಿದು ಬಂದಿಲ್ಲ. ಜಯಮಂಗಲದಲ್ಲಿ ಇಟ್ಟಿಗೆಯಿಂದ ಕಟ್ಟಿದ ಬಸದಿಯೊಂದರ ಕುರುಹುಗಳಿವೆ. ಮಣ್ಣೆಯಲ್ಲಿ ಮಾರಸಿಂಹನ ದಂಡನಾಯಕ ಶ್ರೀ ವಿಜಯ ಕಟ್ಟಿಸಿದ ಸುಂದರವಾದ ಜಿನಾಲಯವೂ ಇಟ್ಟಿಗೆಯದಾಗಿದ್ದು ಈಗ ಪಾಳುಬಿದ್ದಿದೆ. ಕಂಬದಹಳ್ಳಿಯಲ್ಲಿ ಪಂಚಕೂಟ ಬಸದಿಯಿದ್ದು ಅದರ ಮುಂದೆ 50' ಎತ್ತರದ ಬ್ರಹ್ಮದೇವರ ಕಂಬವಿದೆ. ಇವರ ಕಾಲದ ಅತ್ಯಂತ ಮಹತ್ತ್ವಪೂರ್ಣವಾದ ಜೈನಕ್ಷೇತ್ರ ಶ್ರವಣಬೆಳಗೊಳ. ಇಲ್ಲಿನ ಚಂದ್ರಗುಪ್ತ ಬಸದಿ, ಶಾಂತಿನಾಥ ಬಸದಿ, ಶಿವಮಾರನ ಕಾಲದಲ್ಲಿ ಕಟ್ಟಿದ್ದಿರಬಹುದಾದ ಆದರೆ ಮುಂದೆ ಪುನರ್ನಿರ್ಮಾಣಗೊಂಡ ಚಂದ್ರಪ್ರಭಬಸದಿ, ಎಲ್ಲಕ್ಕೂ ಕಲಶವಿಟ್ಟಂತಿರುವ ಚಾವುಂಡರಾಯ ಬಸದಿ ಈ ಕಾಲದ ಕಟ್ಟಡಗಳಾಗಿದ್ದು ಎಲ್ಲವೂ ದ್ರಾವಿಡಶೈಲಿಯಲ್ಲಿವೆ. ಇವರ ಕಾಲದಲ್ಲಿಯೇ ದೊಡ್ಡ ಬೆಟ್ಟದಲ್ಲಿ ಜೈನಮೂರ್ತಿಶಿಲ್ಪದ ಪರಾಕಾಷ್ಠತೆಯಾದ ಗೊಮ್ಮಟೇಶ್ವರನ ಮೂರ್ತಿ ಚಾವುಂಡರಾಯನಿಂದ ನಿರ್ಮಿತವಾಯಿತು. ಹೊರಹೊಮ್ಮಿರುವ ಪರಿಪೂರ್ಣತ್ಯಾಗ, ಆತ್ಮಸಂಯಮ, ಪ್ರಪಂಚದೆಡೆ ಮರುಕ ಬೆರೆತ ಕಿರುನಗೆಯ ನೋಟ, ಹುತ್ತ ಬಳ್ಳಿಗಳು ಬೆಳೆದರೂ ಅಲುಗದ ನಿಶ್ಚಲತೆ ಇವುಗಳಿಂದ ಅದ್ವಿತೀಯವೆನಿಸಿರುವ ಈ ಮೂರ್ತಿ ಪ್ರಪಂಚದಲ್ಲಿನ ಅದ್ಭುತಗಳಲ್ಲೊಂದೆನಿಸಿದೆ. ಗಂಗಬೂತುಗನ ಅಕ್ಕ ಕುಂದಣ ಸೋಮಿದೇವಿ ಮಾಡಿಸಿದ್ದ ಲೋಹಜಿನಬಿಂಬವೂ ಗಂಗರ ಕಾಲದ ಸುಂದರವಾದ ಲೋಹಮೂರ್ತಿಗಳ ಒಂದು ಮಾದರಿಯಾಗಿವೆ.

	ಹೊಯ್ಸಳರ ಕಾಲದಲ್ಲಿಯೂ ಶ್ರವಣಬೆಳ್ಗೊಳ ಮತ್ತು ಇತರ ಕಡೆಗಳಲ್ಲಿ ಅನೇಕ ಬಸದಿಗಳು ನಿರ್ಮಾಣಗೊಂಡವು. ಇವುಗಳಲ್ಲಿ ಪೂರ್ಣವಾಗಿ ಹೊಯ್ಸಳ ಶೈಲಿಯಲ್ಲಿಯೇ ನಿರ್ಮಾಣಗೊಂಡ, ಅತ್ಯಂತ ನವುರಾದ ಅಲಂಕರಣಗಳಿಂದ ಕೂಡಿದ ಸುಂದರವಾದ ಬಸದಿಗಳೆಂದರೆ ಶ್ರವಣಬೆಳ್ಗೊಳದ ಅಕ್ಕನ ಬಸದಿ ಮತ್ತು ಜಿನನಾಥಪುರದ ಶಾಂತಿನಾಥ ಬಸದಿ. ಕರ್ನಾಟಕದ ನಾನಾಭಾಗಗಳಲ್ಲಿ ಚಾಳುಕ್ಯರ, ಹೊಯ್ಸಳರ ಮತ್ತು ಅವರ ಅಧೀನರಾಜರ ಕಾಲಗಳಲ್ಲಿ ಕಟ್ಟಿಸಿದ ನೂರಾರು ಬಸದಿಗಳು ಇಂದಿಗೂ ಉಳಿದುಬಂದಿವೆ. ಲಕ್ಷ್ಮೇಶ್ವರ, ತೇರದಾಳ, ಕೊಪ್ಪಳ, ಗೊಬ್ಬೂರು, ಮಳಖೇಡ, ಸೇಡಂ, ಎವೂರು, ಬಸ್ತಿಹಳ್ಳಿ, ಬಸ್ತಿಪುರ, ಹುಂಚ, ಮೋಳಿಗೆ, ಹನಸೋಗೆ, ಮುಳ್ಳೂರು ಇಂಥ ಇನ್ನೂ ಹಲವಾರು ಊರುಗಳಲ್ಲಿ ಉಳಿದುಬಂದಿರುವ ಚಾಳುಕ್ಯ ಹೊಯ್ಸಳ ಶೈಲಿಗಳ ಬಸದಿಗಳನ್ನು ನೋಡಬಹುದು.

	14-15ನೆಯ ಶತಮಾನಗಳಿಂದೀಚೆಗೆ ಘಟ್ಟದ ಮೇಲುಭಾಗದಲ್ಲಿ ಜೈನವಾಸ್ತು ಶಿಲ್ಪಗಳಿಗೆ ಪ್ರೋತ್ಸಾಹ ಕಡಿಮೆಯಾದರೂ ಅದು ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಬೆಳೆದು ತೀರಪ್ರದೇಶದ ವಿಶಿಷ್ಟ ಶೈಲಿಯಲ್ಲಿ ಕಾಣಿಸಿಕೊಂಡಿತು. ಮೂಡಬಿದ್ರೆ, ವೇಣೂರು, ಕಾರ್ಕಳ, ಹಾಡುವನಹಳ್ಳಿ ಮೊದಲಾದ ಕಡೆ ಅನೇಕ ಬಸದಿಗಳು ನಿರ್ಮಾಣಗೊಂಡವು. ಕರ್ನಾಟಕದ ವಿಶಿಷ್ಟ ಮೂರ್ತಿಶಿಲ್ಪವಾದ ಗೊಮ್ಮಟೇಶ್ವರನ ಬೃಹನ್ಮೂರ್ತಿಗಳು ವೇಣೂರು, ಕಾರ್ಕಳಗಳಲ್ಲಿದ್ದು ಇತ್ತೀಚೆಗೆ ಅಂಥದೇ ಒಂದು ಬೃಹನ್ಮೂರ್ತಿ ಧರ್ಮಸ್ಥಳದಲ್ಲಿ ಸ್ಥಾಪನೆಗೊಂಡಿದೆ. (ನೋಡಿ- ಗೊಮ್ಮಟೇಶ್ವರ)

	ಭಾರತದ ನಾನಾಭಾಗಗಳಲ್ಲಿ ವ್ಯಾಪಕವಾಗಿ ಬಗೆಬಗೆಯಾಗಿ ಹರಡಿ ಬೆಳೆದು ಬಂದ ಜೈನ ವಾಸ್ತುಶಿಲ್ಪಗಳಲ್ಲಿ ತೀರ್ಥಂಕರ ಮೂರ್ತಿಗಳು, ಸಮವಸರಣ, ನಂದೀಶ್ವರ ದ್ವೀಪ, ಅಷ್ಟಾಪದ, ಸಹಸ್ರಕೂಟ ಮುಂತಾದ ಶಿಲ್ಪಗಳು ಜೈನ ಪುರಾಣಗಳಿಂದಾಯ್ದ ವಿಷಯಗಳನ್ನು ಕಂಡರಿಸಿರುವ ಶಿಲ್ಪವಿಶೇಷಗಳಿದ್ದರೂ ಅವನ್ನು ಕಂಡರಿಸುವ ರೀತಿನೀತಿಗಳಲ್ಲೂ ಭಾರತೀಯ ಶಿಲ್ಪ ಶೈಲಿಯನ್ನೇ ನೋಡಬಹುದು. ಉಳಿದಂತೆ ವಾಸ್ತುರೀತಿಯಲ್ಲಾಗಲಿ ಯಕ್ಷಯಕ್ಷಿಯರು, ಅಲಂಕರಣ ಶಿಲ್ಪಗಳು, ಪ್ರಾಣಿಮಾನವರ ಮೂರ್ತಿಗಳು ಮುಂತಾದವನ್ನು ತೋರಿಸುವಲ್ಲಾಗಲಿ ಜೈನ ಬಸದಿಗಳು, ವೈದಿಕ ದೇವಾಲಯಗಳು, ಬೌದ್ಧವಿಹಾರಗಳಲ್ಲಾಗಲಿ ಒಂದಕ್ಕೊಂದು ವ್ಯತ್ಯಾಸವಿರದು. ಜೈನಬಸದಿಗಳಲ್ಲಿ ಅಥವಾ ಇತರ ಕಟ್ಟಡಗಳಲ್ಲಿ ಪ್ರಾಕೃತಿಕ ಮತ್ತು ಇತರ ಕಾರಣಗಳಿಂದ ಉಳಿದಿರುವುದಕ್ಕಿಂತ ನಾಶವಾಗಿರುವುದೇ ಹೆಚ್ಚು. ಆದರೂ ನಾನಾಕಡೆ ವ್ಯಾಪಕವಾಗಿ ಹರಡಿರುವ ಶಿಲ್ಪಗಳು, ಮೂರ್ತಿಗಳು, ಪಟ್ಟಿಕೆಗಳು, ಇತರ ವಾಸ್ತುಭಾಗಗಳು ಮತ್ತು ಈಗ ಉಳಿದುಬಂದಿರುವ ಬಸದಿಗಳು ವಿಸ್ತಾರವಾದ ಜೈನವಾಸ್ತುಶಿಲ್ಪರೀತಿಯ ಭವ್ಯಚಿತ್ರವನ್ನು ಕಣ್ಣೆದುರಿಗೆ ತಂದು ನಿಲ್ಲಿಸುತ್ತವೆ.

	ಭಾರತವನ್ನು ಬಿಟ್ಟು ಹೊರಗಡೆ ಜೈನವಾಸ್ತುಶಿಲ್ಪ ಹರಡಲಿಲ್ಲ. ಶ್ರೀಲಂಕಾದಲ್ಲಿರುವ ಅನುರಾಧಪುರ ಬೌದ್ಧಕ್ಷೇತ್ರವಾಗಿದ್ದಂತೆ ಜೈನಕ್ಷೇತ್ರವೂ ಆಗಿದ್ದು ಅಲ್ಲಿ ಅನೇಕ ಜೈನಬಸದಿಗಳು ನಿರ್ಮಾಣಗೊಂಡಂತೆ ತಿಳಿದುಬಂದರೂ ಈಗ ಅವು ಯಾವುವೂ ಉಳಿದುಬಂದಿಲ್ಲ.										(ಎಂ.ಎಚ್.)	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ